ಚಿಂತಾಮಣಿ
ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯ ಒಂದು ತಾಲ್ಲೂಕು; ಆ ತಾಲ್ಲೂಕಿನ ಕೇಂದ್ರ. ತಾಲ್ಲೂಕಿನ ಉತ್ತರದಲ್ಲಿ ಬಾಗೇಪಲ್ಲಿ ತಾಲ್ಲೂಕು ಮತ್ತು ಆಂಧ್ರ ಪ್ರದೇಶ, ಪಶ್ಚಿಮದಲ್ಲಿ ಶಿಡ್ಲಘಟ್ಟ ತಾಲ್ಲೂಕು, ಪೂರ್ವದಲ್ಲಿ ಶ್ರೀನಿವಾಸಪುರ ಮತ್ತು ದಕ್ಷಿಣದಲ್ಲಿ ಕೋಲಾರ ತಾಲ್ಲೂಕುಗಳು ಇವೆ. ತಾಲ್ಲೂಕಿನ ವಿಸ್ತೀರ್ಣ 909.4 ಚ.ಕಿ.ಮೀ. ಒಟ್ಟು 334 ಗ್ರಾಮಗಳೂ ಒಂದು ಪಟ್ಟಣವೂ ಇರುವ ಈ ತಾಲ್ಲೂಕಿನ ಹೋಬಳಿಗಳು ಚಿಂತಾಮಣಿ, ಅಂಬಾಜಿದುರ್ಗ, ಕಸಬಾ, ಕೈವಾರ, ಮುರಗಮಲ್ಲ, ಮುಂಗಾನಹಳ್ಳಿ ಮತ್ತು ಚಿಲಕಲನೇರ್ಪು. ಜನಸಂಖ್ಯೆ 2,71,246 (2001)

ತಾಲ್ಲೂಕಿನ ವಾಯುಗುಣ ಹಿತಕರವಾದ್ದು. ವಾರ್ಷಿಕ ಸರಾಸರಿ ಮಳೆ 690 ಮಿ.ಮೀ. ವರ್ಷದಲ್ಲಿ 45 ದಿನಗಳು ಮಳೆ ಬೀಳುತ್ತದೆ. ದಿನದ ಸರಾಸರಿ ಗರಿಷ್ಠ ಉಷ್ಣತೆ 29.6ಲಿ ಸೆಂ.ಮೀ. ಮತ್ತು ಕನಿಷ್ಠ ಉಷ್ಣತೆ 18.6ಲಿ ಸೆಂ.ಮೀ. ಮೇ ಅತ್ಯಂತ ಹೆಚ್ಚು ಉಷ್ಣತೆಯ ತಿಂಗಳು; ಜನವರಿ ಅತ್ಯಂತ ಹೆಚ್ಚು ಚಳಿಯ ತಿಂಗಳು.
ಮರುಳುಮಿಶ್ರಿತ ಮಣ್ಣುಳ್ಳ ಈ ತಾಲ್ಲೂಕಿನಲ್ಲಿ ವ್ಯವಸಾಯಯೋಗ್ಯ ಭೂಮಿ 2,14,232 ಎಕರೆಗಳು. 59,802 ಎಕರೆಗಳು ವ್ಯವಸಾಯಕ್ಕೊಳಪಟ್ಟಿವೆ. 5,450 ಎಕರೆಗಳು ಕಾಡಿನಿಂದಲೂ 90,647 ಎಕರೆಗಳು ಹುಲ್ಲುಗಾವಲಿನಿಂದಲೂ ಕೂಡಿದೆ. (1965-66).

ತಾಲ್ಲೂಕಿನ ಉತ್ತರದಲ್ಲಿ ಕೆಲವೇ ಕಿಲೋಮೀಟರುಗಳಷ್ಟು ದೂರ ಪಾಪಘ್ನಿ ನದಿ ಹರಿದು ಆಂಧ್ರ ಪ್ರದೇಶವನ್ನು ಪ್ರವೇಶಿಸುತ್ತದೆ. ತಾಲ್ಲೂಕಿನಲ್ಲಿ 3,210 ಕೆರೆಗಳೂ, 2,000 ಬಾವಿಗಳೂ ಇವೆ (1965-66). ರಾಗಿ, ಬತ್ತ, ಕಬ್ಬು, ನೆಲಗಡಲೆ, ಮೆಣಸಿನಕಾಯಿ, ಈರುಳ್ಳಿ, ಆಲೂಗೆಡ್ಡೆ, ದ್ವಿದಳ ಧಾನ್ಯಗಳು ಇಲ್ಲಿಯ ಬೆಳೆಗಳು. ಮಾವಿನ ಹಣ್ಣು, ದ್ರಾಕ್ಷಿ ಮತ್ತು ದಾಳಿಂಬೆ ಮುಖ್ಯವಾದ ಹಣ್ಣುಗಳು.

ಕುರಿ, ಹಂದಿ, ಕೋಳಿಗಳನ್ನು ಸಾಕುತ್ತಾರೆ, ಗ್ರಾಮಗಳಲ್ಲಿ ವ್ಯವಸಾಯದ ಜೊತೆಗೆ ಪಶುಪಾಲನೆಯೂ ಸಾಗುತ್ತದೆ. ಚಿಂತಾಮಣಿ, ಬಟ್ಲಹಳ್ಳಿ ಮತ್ತು ಬುರುಡಗುಂಟೆ ಗ್ರಾಮಗಳಲ್ಲಿ ಒಂದೊಂದು ಪಶುವೈದ್ಯಶಾಲೆಯುಂಟು. ಚಿಂತಾಮಣಿಯಲ್ಲಿ ಪಶುಗರ್ಭಧಾರಣ ಕೇಂದ್ರವೂ ಹಂದಿ ಅಭಿವೃದ್ಧಿ ಕೇಂದ್ರವೂ ಇವೆ. ಚಿಂತಾಮಣಿಗೆ 12 ಕಿ.ಮೀ. ದೂರದಲ್ಲಿ ನೈಋತ್ಯ ದಿಕ್ಕಿನಲ್ಲಿರುವುದು ಅಂಬಾಜಿದುರ್ಗ. ಸಮುದ್ರಮಟ್ಟದಿಂದ 4,399' ಎತ್ತರದಲ್ಲಿರುವ ಈ ಬೆಟ್ಟದ ಮೇಲೆ ಟೀಪು ಸುಲ್ತಾನ್ ಕೋಟೆ ಕಟ್ಟಿಸಿದ. 1791ರಲ್ಲಿ ಬ್ರಿಟಿಷರು ಇದನ್ನು ವಶಪಡಿಸಿಕೊಂಡರು. ಈಗ ಅಂಬಾಜಿದುರ್ಗ ಚಿಂತಾಮಣಿ ತಾಲ್ಲೂಕಿನ ಒಂದು ಹೋಬಳಿ ಕೇಂದ್ರ. ಚಿಂತಾಮಣಿಯಿಂದ 8 ಕಿ.ಮೀ ದೂರದಲ್ಲಿರುವ ಮುರುಗಮಲೆ ಬೆಟ್ಟದ ಇಳಿಜಾರು ಪ್ರದೇಶದಲ್ಲಿ ಪ್ರಾಗಿತಿಹಾಸಕಾಲದ ಅವಶೇಷಗಳುಂಟು. ಇಲ್ಲಿಯ ಮುಕ್ತೀಶ್ವರ ದೇವಾಲಯದ ಬಳಿ ನವಶಿಲಾಯುಗದ ಪಳೆಯುಳಿಕೆಗಳು ದೊರಕಿವೆ.

	ಚಿಂತಾಮಣಿಯಲ್ಲಿ ದೊರಕುವ ಬಿಳಿಯ ಜೇಡಿಮಣ್ಣು ಪಿಂಗಾಣಿ ಉಪಕರಣಗಳ ತಯಾರಿಕೆಗೆ ಉಪಯುಕ್ತವಾದದ್ದು. ತಾಲ್ಲೂಕಿನಲ್ಲಿ ರೇಷ್ಮೆ, ಸುಗಂಧ ದ್ರವ್ಯ, ಅಗರಬತ್ತಿ ಇವು ತಯಾರಾಗುತ್ತವೆ. ಇವು ಆಂಧ್ರ ಪ್ರದೇಶ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರಗಳಿಗೆ ಸಾಗುತ್ತವೆ. ಮರ ಕುಯ್ಯುವ ಉದ್ಯಮವೂ ಉಂಟು. ಕೈಗಾರಿಕೆಗಳ ಅಭಿವೃದ್ಧಿಗೆ ಪೂರಕವಾಗಿ ಈ ತಾಲ್ಲೂಕಿನಲ್ಲಿ ಕೈಗಾರಿಕಾ ಸಹಕಾರ ಸಂಘಗಳು, ಮೈಸೂರಿನ ಸ್ಟೇಟ್ ಬ್ಯಾಂಕ್ ಮತ್ತು ಇತರ ಕೆಲವು ಬ್ಯಾಂಕುಗಳ ಶಾಖೆಗಳು ಇವೆ.

ಚಿಂತಾಮಣಿ ತಾಲ್ಲೂಕಿನ ಸಿಂಗ್ರಪಳ್ಳಿಯಲ್ಲಿ ಫಾಲ್ಗುಣ ಶುದ್ಧ ಏಕಾದಶಿಯಂದು ನಡೆಯುವ ಲಕ್ಷ್ಮೀನರಸಿಂಹಸ್ವಾಮಿ ಜಾತ್ರೆ, ಕೋನಕುಂಟ್ಲು ಗ್ರಾಮದಲ್ಲಿ ಆಷಾಢ ಶುದ್ಧ ಪೌರ್ಣಮಿಯಂದು ನಡೆಯುವ ವೆಂಕಟರಮಣಸ್ವಾಮಿ ಜಾತ್ರೆ, ಆಲಂಬಗಿರಿ ಗ್ರಾಮದಲ್ಲಿ ಚೈತ್ರ ಶುದ್ಧ ಪೌರ್ಣಮಿಯಂದು ನಡೆಯುವ ವೆಂಕಟರಮಣಸ್ವಾಮಿ ಜಾತ್ರೆ ಮತ್ತು ಬುರುಡಗುಂಟೆ ಗ್ರಾಮದಲ್ಲಿ ಜೈತ್ರ ಬಹುಳ ತ್ರಯೋದಶಿಯಂದು ನಡೆಯುವ ಗಂಗಮ್ಮ ದೇವರ ಜಾತ್ರೆ-ಇವು ಪ್ರಸಿದ್ಧವಾದವು. ಜಾತ್ರೆಗಳ ಕಾಲದಲ್ಲಿ ದನಗಳ ಪ್ರದರ್ಶನವೂ ಅವುಗಳ ವ್ಯಾಪಾರವೂ ನಡೆಯುತ್ತವೆ.

ಚಿಂತಾಮಣಿ ಪಟ್ಟಣ ಕೋಲಾರಕ್ಕೆ ವಾಯುವ್ಯದಲ್ಲಿ 43 ಕಿ.ಮೀ. ದೂರದಲ್ಲಿದೆ. ಯಶವಂತಪುರ-ಬಂಗಾರಪೇಟೆ ನ್ಯಾರೋಗೇಜ್ ರೈಲುಮಾರ್ಗ ಇದರ ಮುಖಾಂತರ ಹಾದುಹೋಗುತ್ತವೆ. ಪಟ್ಟಣದ ಜನಸಂಖ್ಯೆ 65,456 (2001). ನಗರದ ವಿಸ್ತೀರ್ಣ 11.14 ಚ. ಕಿ.ಮೀ. ಚಿಂತಾಮಣಿ ರಾವ್ ಎಂಬ ಮರಾಠಿ ನಾಯಕ ಈ ಪಟ್ಟಣವನ್ನು ಸ್ಥಾಪಿಸಿದನೆಂದೂ ಆದ್ದರಿಂದ ಇದಕ್ಕೆ ಆತನ ಹೆಸರೇ ಬಂದಿದೆಯೆಂದೂ ಹೇಳಲಾಗಿದೆ.

ಚಿಂತಾಮಣಿ ಪೌರಸಭಾ ಪಟ್ಟಣ. ನಗರಕ್ಕೆ ಕನ್ನಂಪಲ್ಲಿ ಕೆರೆ ಮತ್ತು ಕೊಳವೆ ಬಾವಿಗಳಿಂದ ನೀರು ಸರಬರಾಜಾಗುತ್ತದೆ. ವಿದ್ಯುತ್ ಸೌಕರ್ಯವುಂಟು. ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಾಲೆಗಳೂ, ವೃತ್ತಿಶಿಕ್ಷಣಶಾಲೆ ಮತ್ತು ಪ್ರಥಮ ದರ್ಜೆ ಕಾಲೇಜೂ ಆಸ್ಪತ್ರೆಗಳೂ ಇವೆ. ಅಗರಬತ್ತಿ ತಯಾರಿಕೆ, ಚಿನ್ನ-ಬೆಳ್ಳಿ ಕೆಲಸಗಳಿಗೆ ಚಿಂತಾಮಣಿ ಪ್ರಸಿದ್ಧವಾಗಿದೆ. ಇದೊಂದು ವ್ಯಾಪಾರಕೇಂದ್ರ, ಕೋಲಾರ ಜಿಲ್ಲೆಯ ಪ್ರಥಮ ನಿಯಂತ್ರಿತ ಮಾರುಕಟ್ಟೆ ಆರಂಭವಾದ್ದು ಚಿಂತಾಮಣಿಯಲ್ಲೆ. ಇಲ್ಲಿಂದ ತಾಲ್ಲೂಕಿನ ಮತ್ತು ಹೊರಗಿನ ಮುಖ್ಯ ಸ್ಥಳಗಳಿಗೆ ರಸ್ತೆಗಳಿವೆ.									(ಎಂ.ಎಫ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ